ಪರವಸ್ತು -
	ಅಂತಿಮ ಸತ್ಯದ ಸ್ವರೂಪವನ್ನು ತಿಳಿಸುವ ಪದ ಪರವಸ್ತು ಎಂದರೆ ಎಲ್ಲ ಚರಾಚರ ಸಂಗತಿಗಳನ್ನೂ ವಿವರಿಸಬಲ್ಲ ಏಕಮೇವಾದ್ವಿತೀಯವಾದ ತತ್ತ್ವ.

	ಪರವಸ್ತುವಿನ ಕಲ್ಪನೆಗಳಲ್ಲಿ ತಾತ್ತ್ವಿಕ ಮತ್ತು ಧಾರ್ಮಿಕ ಕಲ್ಪನೆಗಳೆಂದು ಎರಡು ವಿಧ. ಧಾರ್ಮಿಕ ಪರವಸ್ತುವಿನ ಕಲ್ಪನೆ ಮನುಷ್ಯನ ಕೆಲವೊಂದು ಮೂಲಭೂತ ಬೇಡಿಕೆಗಳನ್ನು ತೃಪ್ತಿಪಡಿಸಬೇಕಾಗಿರುವುದರಿಂದ ಅದು ಪರವಸ್ತುವಿಗೆ ಒಂದಲ್ಲ ಒಂದು ರೀತಿಯಲ್ಲಿ ವೈಯಕ್ತಿಕತೆಯನ್ನು ಆರೋಪಿಸುತ್ತದೆ. ತಾತ್ತ್ವಿಕ ಪರವಸ್ತುವಿನ ಕಲ್ಪನೆ ಸತ್ಯವನ್ನು ಯಥಾವತ್ತಾಗಿ ವಿವರಿಸುವ ಉದ್ದೇಶವನ್ನು ಹೊಂದಿರುವುದರಿಂದ ಅದು ಪರವಸ್ತುವಿಗೆ ಆ ಗುಣವನ್ನು ಕಡ್ಡಾಯವಾಗಿ ಆರೋಪಿಸುವ ಜವಾಬ್ದಾರಿ ಹೊತ್ತು ಕೊಳ್ಳುವುದಿಲ್ಲ.

	ತಾತ್ತ್ವಿಕ ಪರವಸ್ತುವಿನ ಕಲ್ಪನೆಗಳಲ್ಲಿ ಸಗುಣ ಮತ್ತು ನಿರ್ಗುಣ ಕಲ್ಪನೆಗಳೆಂದು ಎರಡು ವಿಧ. ಸಗುಣ ಕಲ್ಪನೆ ಪರವಸ್ತುವಿಗೆ ಉಪಾಧಿಗಳನ್ನು ಹೇಳಿದರೆ ನಿರ್ಗುಣ ಕಲ್ಪನೆ ಪರವಸ್ತುವನ್ನು ಉಪಾಧಿರಹಿತವೆನ್ನುತ್ತದೆ.

	ಕಣ್ಣಿಗೆ ಕಾಣುವ ಅನೇಕ ಸತ್ಯವನ್ನು ವಿವರಿಸಲು ಏಕಮೇವಾದ್ವಿತೀಯವಾದ ಸತ್ಯ ಒಂದು ಇರುವುದು ಅತ್ಯಗತ್ಯವಾಗಿರುವುದರಿಂದ ಪರವಸ್ತು ಇದೆಯ ಎಂಬ ಪ್ರಶ್ನೆ ಕೇಳುವುದೇ ಅಸಂಬದ್ಧ ಎಂಬುದು ಪರವಸ್ತುವಾದಿಗಳ ಅಭಿಪ್ರಾಯ. ಆದ್ದರಿಂದ ಪರವಸ್ತುವಿಗೆ ಸಂಬಂಧಿಸಿದಂತೆ ಗಮನಿಸಬೇಕಾದ ವಿಷಯಗಳು 1 ಅದರ ಸ್ವರೂಪ 2 ಅದಕ್ಕೂ ಪ್ರಪಂಚಕ್ಕೂ ಇರುವ ಸಂಬಂಧ 3 ಅದಕ್ಕೂ ಮಾನವಜ್ಞಾನಕ್ಕೂ ಇರುವ ಸಂಬಂಧ.

	1 ಪರವಸ್ತುವನ್ನು ಉಪಾಧಿರಹಿತ ಎಂದು ಭಾವಿಸುವವರ ಪ್ರಕಾರ ಅದು ಸಚ್ಚಿದಾನಂದ ಸ್ವರೂಪಿ, ವಿಶ್ವಾತೀತವಾದ ಸತ್ಯ, ಬದಲಾಗದ ಶಾಶ್ವತವಾದ ಏಕಮೇವಾದ್ವತೀಯವಾದ ಸತ್ಯ. ಅದು ಸರ್ವತಂತ್ರಸ್ವತಂತ್ರ. ಸ್ವಾಯತ್ತ, ಸ್ವನಿರ್ಣಾಯಕ, ಸ್ವಯಂಭೊ, ಸರ್ವವ್ಯಾಪಿ, ಸ್ಥಿರ, ಶಾಶ್ವತ, ಜ್ಞಾತೃಜ್ಞೇಯ, ಅತ್ಯಂತಿಕ ಮತ್ತು ನಿರುಪಾಧಿಕ ಸತ್ಯ ಸೌಂದರ್ಯ ಶ್ರೇಯಸ್ಸು, ಅಪ್ರಮೇಯ, ಅವ್ಯಕ್ತ, ಅಚಿಂತ್ಯ, ಅನುಭಾವಗಮ್ಯ.

	ಪರವಸ್ತುವನ್ನು ಸಗುಣ ಎಂದು ಭಾವಿಸುವವರ ಪ್ರಕಾರ ಅದು ಭಕ್ತಿ ಪೂಜೆ ಪ್ರಾರ್ಥನೆಗಳು ವಸ್ತು. ಪ್ರಕೃತಿ ಮತ್ತು ಪುರುಷ ಅದರ ವಿಶೇಷಣಗಳು, ಪರವಸ್ತು ಸರ್ವಜ್ಞ ಸರ್ವಶಕ್ತ, ಸೃಷ್ಟಿಸ್ಥಿತಿಲಯಕರ್ತ, ದಯಾಮಯ, ಭಕ್ತಪರಾಧೀನ, ಭಕ್ತವತ್ಸಲ, ಅತ್ಯಂತಿಕ ಕಾರಣ, ತಪೋಗಮ್ಯ, ಜಗದಂತರ್ಯಾಮಿ ಮತ್ತು ವಿಶ್ವಾತೀತ ಭಕ್ತಿ ಪ್ರೀತಿ ಪ್ರಾರ್ಥನೆಗಳು ಅಂಥ ಪರವಸ್ತುವನ್ನು ಅನುಭಾವಗಮ್ಯ ವಿಷಯವನ್ನಾಗಿಸುತ್ತವೆ.

	2 ಪರವಸ್ತುವನ್ನು ಉಪಾಧಿರಹಿತ ಎಂದು ಭಾವಿಸುವವರು ಹೀಗೆ ಹೇಳುತ್ತಾರೆ. ಪ್ರಪಂಚಕ್ಕೂ ಪರವಸ್ತುವಿಗೂ ಯಾವ ಸಂಬಂಧವೂ ಇಲ್ಲ. ಪ್ರಪಂಚ ಸಾಪೇಕ್ಷ, ತಾತ್ಕಾಲಿಕ ಸತ್ಯ. ಪರವಸ್ತುವಿನ ದರ್ಶನಜ್ಞಾನ ಮನುಷ್ಯನಿಗೆ ಆಗುವವರೆಗೂ ಮನುಷ್ಯ ಪ್ರಪಂಚದ ಸತ್ಯವೆಂದೂ ಪ್ರಪಂಚದ ಸೃಷ್ಟಿಸ್ಥಿತಿಲಯಕಾರ್ಯಗಳು ಪರವಸ್ತುವನ್ನು ಅವಲಂಬಿಸಿವೆ. ಸೃಷ್ಟಿಸ್ಥಿತಿಲಯಕರ್ತೃತ್ವಗಳೇ ಮೊದಲಾದ ಉಪಾಧಿಗಳು ಪರವಸ್ತುವಿನ ಎಲ್ಲೆಯನ್ನು ಸಂಕುಚಿತಗೊಳಿಸುವುದರಿಂದ ಪರವಸ್ತುವಿಗೆ ಯಾವ ರೀತಿಯ ಉಪಾಧಿಗಳೂ ಇಲ್ಲ. ಪ್ರಪಂಚದ ಅಸ್ತಿತ್ವ ಪರವಸ್ತುವಿನ ಸಾಧ್ಯತೆಗಳಲ್ಲಿ ಒಂದು. ಪರವಸ್ತುವಿನ ಆತ್ಯಂತಿಕತೆಯನ್ನು ಸಾಧಿಸುವ ಅಂಶ ಪ್ರಪಂಚವನ್ನೇ ಪರವಸ್ತು ಎಂದು ತಿಳಿಯುವುದರಿಂದ ವ್ಯಕ್ತಿಯ ಆಲೋಚನೆ. ಬದುಕು ಸಂಕುಚಿತಗೊಳ್ಳುವುದರಿಂದ ಪ್ರಪಂಚಕ್ಕೆ ತಾತ್ಕಾಲಿಕ ಮೌಲ್ಯ ಮಾತ್ರ ಇದೆ. 

	ಪರವಸ್ತುವನ್ನು ಸಗುಣ ಎಂದು ಭಾವಿಸುವ ಒಂದು ಗುಂಪಿನವರು ಹೀಗೆ ವಾದಿಸುತ್ತಾರೆ ; ಪರವಸ್ತು ಪ್ರಕೃತಿ ಮತ್ತು ಪುರುಷರನ್ನು ತನ್ನ ವಿಶೇಷಗುಣಗಳನ್ನಾಗಿ ಹೊಂದಿರುವುದರಿಂದ ಪ್ರಪಂಚ ಪರವಸ್ತುವಿನ ವಿಶೇಷಣವಾಗಿ ಮೌಲ್ಯವನ್ನು ಪಡೆಯುತ್ತದೆ. ಪರವಸ್ತು ಗುಣರಹಿತವಾಗಿ ಇರಲು ಸಾಧ್ಯವಿಲ್ಲದಿರುವುದರಿಂದ ಪ್ರಪಂಚ ಯಾವಾಗಲೂ ಸತ್ಯ. ಆದರೆ ಪ್ರಪಂಚ ವಿಶೇಷಣವಾಗಿರುವುದರಿಂದ ಪರವಸ್ತುವಿಲ್ಲದೆ ಪ್ರಪಂಚಕ್ಕೆ ಯಾವ ಅಸ್ತಿತ್ವವೂ ಇಲ್ಲ. ಹೀಗಾಗಿ ಪರವಸ್ತುವಿಗೂ ಪ್ರಪಂಚಕ್ಕೂ ವಿಶೇಷ ವಿಶೇಷಣ ಸಂಬಂಧವಿದ್ದು ಪರವಸ್ತು ಸಪ್ರಪಂಚಸತ್ಯವಾಗಿದೆ.

	ಇವರಲ್ಲಿ ಇನ್ನೊಂದು ಗುಂಪಿನವರ ವಾದ ಇಷ್ಟು : ಸತ್ಯದ ಹಲವಾರು ಹಂತಗಳಲ್ಲಿ ಪರವಸ್ತು ಕಟ್ಟಕಡೆಯದು. ಪ್ರಪಂಚ ಸತ್ಯದ ಶ್ರೇಣಿಯಲ್ಲಿ ಒಂದು ಹಂತವಾಗಿದ್ದು ಪ್ರತ್ಯೇಕ ಅಸ್ತಿತ್ವವನ್ನು ಹೊಂದಿದೆ. ಪ್ರಪಂಚದ ಸೃಷ್ಟಿಸ್ಥಿತಿಲಯಕರ್ತೃವಾಗಿ ಪರವಸ್ತು ಪ್ರಪಂಚದೊಡನೆ ಸಂಬಂಧವನ್ನು ಪಡೆದಿದೆ. ಪರವಸ್ತು ಪ್ರಪಂಚರಹಿತವಾಗಿ ಅಸ್ತಿತ್ವವನ್ನು ಹೊಂದಿದ್ದರೂ ಪ್ರಪಂಚದ ಮೂಲಭೂತ ತತ್ತ್ವವಾಗಿ ಅದು ಪ್ರಪಂಚಕ್ಕೆ ಅತ್ಯಗತ್ಯವಾಗಿದೆ.

	3 ಪರವಸ್ತುವಿಗೂ ನಮ್ಮ ಜ್ಞಾನಕ್ಕೂ ಇರುವ ಸಂಬಂಧದ ಬಗ್ಗೆ ಹಲವಾರು ಅಭಿಪ್ರಾಯಗಳಿವೆ.

	ಪರವಸ್ತುವನ್ನು ಉಪಾಧಿರಹಿತ ಎಂದು ಭಾವಿಸುವವರದು ಒಂದು ಗುಂಪು. ನಮ್ಮ ಜ್ಞಾನ ಉಪಾಧಿರಹಿತವಾಗಿ ಎಂದೂ ಇರಲು ಸಾಧ್ಯವಿಲ್ಲದಿರುವುದರಿಂದ ಅದು ಪರವಸ್ತುವನ್ನು ಎಂದೂ ದೃಢವಾಗಿ ಮತ್ತು ಸಮರ್ಪಕವಾಗಿ ತಿಳಿಯಲು ಸಹಾಯ ಮಾಡಲಾರದು ಎಂದು ಅದರ ಅಭಿಪ್ರಾಯ. ಇನ್ನೊಂದು ಗುಂಪು ಪರವಸ್ತುವೇ ಜ್ಞಾನಸ್ವರೂಪಿಯಾಗಿರುವುದರಿಂದ ವ್ಯಕ್ತಿ ತನ್ನ ಸಣ್ಣತನವನ್ನು ಕಳೆದುಕೊಂಡು ಬ್ರಹ್ಮನ್ ಆದಾಗ ಪರವಸ್ತುವಿನ ಜ್ಞಾನವನ್ನು ಪಡೆಯಬಹುದು ಎಂದು ಅಭಿಪ್ರಾಯ ಪಡುತ್ತದೆ. ಮತ್ತೊಂದು ಗುಂಪು, ನಮ್ಮ ಜ್ಞಾನ, ಏನೆಂದರೂ ಪ್ರಪಂಚಕ್ಕೆ ಸೀಮಿತವಾದದ್ದು. ಏಕೆಂದರೆ ತಾರ್ಕಿಕ ಜ್ಞಾನವೇ ಜ್ಞಾನ, ಪ್ರಪಂಚಕ್ಕೆ ಸಾಪೇಕ್ಷವಾದ ಮೌಲ್ಯವಿದೆ, ಪ್ರಪಂಚ ತೋರಿಕೆಯ ಸತ್ಯ, ಆದ್ದರಿಂದ ಜ್ಞಾನ ಪ್ರಾಪಂಚಿಕ, ಅದು ಸಾಪೇಕ್ಷ ತೋರಿಕೆಯಾಗಿದ್ದು ಪರವಸ್ತುವನ್ನು ಎಂದೂ ಮುಟ್ಟಲಾರದು-ಎಂದು ವಾದಿಸುತ್ತದೆ.

	ಪರವಸ್ತುವನ್ನು ಸಗುಣ ಎಂದು ಭಾವಿಸುವವರ ಒಂದು ಗುಂಪಿನ ಪ್ರಕಾರ ಪ್ರಪಂಚ ಪರವಸ್ತುವನ್ನು ಆಧೇಯನಾಗಿ, ವಿಶೇಷ್ಯವಾಗಿ ಹೊಂದಿರುವುದರಿಂದ ಪ್ರಪಂಚ ಜ್ಞಾನ ಪರವಸ್ತುವನ್ನು ಸೂಚಿಸುತ್ತದೆ, ಪರವಸ್ತುವಿನ ಜ್ಞಾನವನ್ನು ಪಡೆಯಲು ಪ್ರೋತ್ಸಾಹಿಸುತ್ತದೆ. ಕೊನೆಗೆ ಪರವಸ್ತು ಜ್ಞಾನದಲ್ಲಿ ವಿಲೀನವಾಗುತ್ತದೆ. ಇನ್ನೊಂದು ಗುಂಪಿನ ಪ್ರಕಾರ ಪ್ರಪಂಚಕ್ಕೆ ಪ್ರತ್ಯೇಕ ಅಸ್ತಿತ್ವ ಇರುವುದರಿಂದ ನಮ್ಮ ಜ್ಞಾನ ಪ್ರಾಪಂಚಿಕ ಜ್ಞಾನವಾಗಿದ್ದು ಪ್ರಾಪಂಚಿಕ ಜ್ಞಾನ ಪರವಸ್ತುವಿನ ಅಲ್ಪಜ್ಞಾನವನ್ನು ಮಾತ್ರ ಪಡೆಯಲು ಸಹಾಯ ಮಾಡುತ್ತದೆ.

	ಪರವಸ್ತು ಅನುಭವಕ್ಕೆ ಸಿಕ್ಕುವ ಸಂಗತಿ ಎಂಬುದರಲ್ಲಿ ಪರವಸ್ತುವಾದಿಗಳಿಗೆ ಅನುಮಾನವಿಲ್ಲ. ಆದರೆ ವ್ಯಾವಹಾರಿಕ ಅನುಭವ ತರ್ಕಗಳು ಮನೋಬುದ್ಧಿಗಳು ಜ್ಞಾನೇಂದ್ರಿಯ ಕರ್ಮೇಂದ್ರಿಯಗಳು ಪರವಸ್ತುವನ್ನು ಮುಟ್ಟಲಾರವು ಎಂಬುದು ಅವರ ವಾದ. ಪರವಸ್ತುವಿನ ದರ್ಶನಸಾಕ್ಷಾತ್ಕಾರದ ಸಾಧನ ಅನುಭಾವ. ವ್ಯಾವಹಾರಿಕ ಅನುಭವ ಮತ್ತು ಬುದ್ಧಿ ಪರವಸ್ತುವಿನ ಬಗ್ಗೆ ಇರುವ ತಪ್ಪು ಅಭಿಪ್ರಾಯವನ್ನು ಸರಿಪಡಿಸಿಕೊಳ್ಳಲು ಮಾತ್ರ ಸಹಾಯ ಮಾಡುತ್ತವೆ-ಎಂಬುದು ಅವರ ತಿಳಿವಳಿಕೆ.

	ಪರವಸ್ತುವಾದಕ್ಕೆ ವಿರುದ್ಧವಾಗಿ ಭೌತಿಕವಾದ, ವಾಸ್ತವಿಕವಾದ, ಅಸ್ತಿತ್ವವಾದಗಳೇ ಮೊದಲಾದ ವಾದಗಳಿವೆ. ಪರವಸ್ತುವಾದಕ್ಕೆ ಇರುವಷ್ಟೇ ಮಹತ್ತ್ವ ಅವುಗಳಿಗೂ ಇವೆ. ಸಗುಣ ಪರವಸ್ತುವಿನ ಕಲ್ಪನೆ ಜನಸಾಮಾನ್ಯರಿಗೆ ತೃಪ್ತಿ ಕೊಡುವಷ್ಟು ನಿರ್ಗುಣ ಪರವಸ್ತುವಿನ ಕಲ್ಪನೆ ಕೊಡುವುದಿಲ್ಲ. ಆದರೆ ನಿರ್ಗುಣ ಪರವಸ್ತುವಿನ ಕಲ್ಪನೆ ಬುದ್ಧಿವಂತರನ್ನು ತೃಪ್ತಿಪಡಿಸುತ್ತದೆ. ಹೀಗಾಗಿ ಅಂತಿಮ ಸತ್ಯದ ಬಗ್ಗೆ ಇರುವ ಎಲ್ಲ ಅಭಿಪ್ರಾಯಗಳಿಗೂ ಜನಮನ್ನಣೆ ಇರುವುದರಿಂದ ಸತ್ಯ ಇದಮಿತ್ಥಂ ಎಂದು ನಿರ್ಣಯಾತ್ಮಕವಾಗಿ ಹೇಳಲು ಸಾಧ್ಯವಾಗಿಲ್ಲ.											(ಪಿ.ಎಚ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ